ಗುತ್ತಿಗೆ/ಬಾಡಿಗೆ ಒಪ್ಪಂದಗಳಂತಹ ರಿಯಲ್ ಎಸ್ಟೇಟ್ ಒಪ್ಪಂದಗಳಿಗೆ ಎಲೆಕ್ಟ್ರಾನಿಕ್ ಸಹಿಗಳನ್ನು ಬಳಸಲಾಗುವುದಿಲ್ಲ.

ಲಿಖಿತ ಒಪ್ಪಂದಕ್ಕೆ ಸಹಿ ಮಾಡುವುದು

ಕೊನೆಯ ಅಪ್ಡೇಟ್ Jul 22, 2022

ಸಹಿ ಮಾಡುವ ಮುನ್ನ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು

ನೀವು ಮನೆಯೊಂದನ್ನು ಬಾಡಿಗೆಗೆ ನೀಡಲು ಅಥವಾ ಪಡೆದುಕೊಳ್ಳಲು ತೀರ್ಮಾನಿಸಿದ್ದಲ್ಲಿ, ಈ ನಿಟ್ಟಿನಲ್ಲಿ ಲಿಖಿತ ಒಪ್ಪಂದಕ್ಕೆ ಸಹಿ ಮಾಡುವ ಮುನ್ನ ಈ ಕೆಳಕಂಡ ಅಂಶಗಳಿಗೆ ಗಮನವೀಯುವುದು ಅತ್ಯವಶ್ಯ.

ಒಪ್ಪಂದವನ್ನು ಕಡ್ಡಾಯವಾಗಿ ಓದಿರಿ

ಸಹಿ ಮಾಡುವ ಮೊದಲು, ನೀವು ಅಥವಾ ನಿಮ್ಮ ವಕೀಲರು ಒಪ್ಪಂದದಲ್ಲಿ ನಮೂದಿಸಲಾಗಿರುವ ಎಲ್ಲ ಷರತ್ತುಗಳನ್ನು ಕೂಲಂಕಷವಾಗಿ ಓದಿ ಅರ್ಥೈಸಿಕೊಳ್ಳಿ. ದಾಖಲೆಯಲ್ಲಿರುವ ವಿಷಯವನ್ನು ತಿಳಿಯದೇ ಸಹಿ ಮಾಡಬೇಡಿ. ಸಹಿ ಮಾಡಿದ ನಂತರ ನೀವು ದಾಖಲೆಯಲ್ಲಿರುವ ಮಾಹಿತಿ ಬಗ್ಗೆ ನಿಮಗೆ ತಿಳಿದಿಲ್ಲವೆಂದಾಗಲೀ ನೀವು ಅದನ್ನು ಓದದೆಯೇ ಸಹಿ ಮಾಡಿದಿರಿ ಎಂದಾಗಲೀ ವಾದ ಮಾಡಲು ಅವಕಾಶವಿರುವುದಿಲ್ಲ.

ಸಾಕ್ಷಿಗಳ ಸಮಕ್ಷಮ

ಒಪ್ಪಂದವನ್ನು ಸವಿವರವಾಗಿ ಓದಿದ ನಂತರ ನೀವು ಮತ್ತು ಮಾಲೀಕ/ಪರವಾನಗಿ ನೀಡುವವರು/ಬಾಡಿಗೆದಾರರು/ಪರವಾನಗಿ ಪಡೆಯುವವರು ದಾಖಲೆಗೆ ಸಹಿ ಮಾಡತಕ್ಕದ್ದು. ಈ ಸಮಯದಲ್ಲಿ ಕನಿಷ್ಟ ಇಬ್ಬರು ಸಾಕ್ಷಿಗಳು ಹಾಜರಿರಲೇಬೇಕು. ಈ ನಿಯಮ ಐಚ್ಛಿಕವಲ್ಲ, ಕಡ್ಡಾಯ. ಸಾಕ್ಷಿಗಳ ಸಮ್ಮುಖದಲ್ಲಿ ಸಹಿ ಮಾಡದ ಒಪ್ಪಂದವನ್ನು ಕಾನೂನಿನಲ್ಲಿ ಮಾನ್ಯ ಮಾಡುವುದಿಲ್ಲ.

 

ಸಹಿ ಮಾಡಿದ ನಂತರ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು

ಲಿಖಿತ ರೂಪದಲ್ಲಿರುವ ಬಾಡಿಗೆ ಒಪ್ಪಂದಕ್ಕೆ ಸಹಿ ಮಾಡಿದ ನಂತರ ನೀವು ಈ ಕೆಳಕಂಡ ಕ್ರಮಗಳನ್ನು ತೆಗೆದುಕೊಳ್ಳತಕ್ಕದ್ದು.

ಒಪ್ಪಂದವನ್ನು ನೋಟರೀಕರಿಸುವುದು ಮತ್ತು ನೋಂದಣಿ ಮಾಡುವುದು

ನೀವು ಮನೆಯನ್ನು ಬಾಡಿಗೆಗೆ ತೆಗೆದುಕೊಳ್ಳುತ್ತಿದ್ದಲ್ಲಿ ಅಥವಾ ಕೊಡುತ್ತಿದ್ದಲ್ಲಿ ಬಾಡಿಗೆ ಒಪ್ಪಂದಕ್ಕೆ ಸಹಿ ಮಾಡಿದ ನಂತರ ಅದನ್ನು ನೋಟರೀಕರಣ ಅಥವಾ ನೋಂದಣಿ ಮಾಡಲು ತಪ್ಪದೇ ಕ್ರಮ ತೆಗೆದುಕೊಳ್ಳಿ.

ಹನ್ನೊಂದು ತಿಂಗಳ ಅವಧಿಯ ಬಾಡಿಗೆ ಒಪ್ಪಂದವನ್ನು ನೋಂದಣಿ ಮಾಡುವುದು ಕಡ್ಡಾಯವಲ್ಲ. ಆದರೆ ನೋಟರೀಕರಣ ಮಾಡುವುದು ಕಡ್ಡಾಯ.

ಪೋಲೀಸ್ ದೃಢೀಕರಣ

ನೀವು ಮನೆಯನ್ನು ಬಾಡಿಗೆಗೆ ಕೊಡುತ್ತಿದ್ದಲ್ಲಿ, ಬಾಡಿಗೆ ಒಪ್ಪಂದಕ್ಕೆ ಸಹಿ ಮಾಡಿದ ನಂತರ ನಿಮ್ಮ ಬಾಡಿಗೆದಾರರ ಪೋಲೀಸ್ ದೃಢೀಕರಣವನ್ನು ತಪ್ಪದೇ ಮಾಡಿಸತಕ್ಕದ್ದು. ಪೋಲೀಸ್ ದೃಢೀಕರಣ ಪಡೆಯುವುದು ಬಾಡಿಗೆದಾರರ ಜವಾಬ್ದಾರಿಯಲ್ಲ. ಆದರೆ, ಈ ಪ್ರಕ್ರಿಯೆಗಾಗಿ ಬಾಡಿಗೆದಾರ ತನ್ನ ಕುರಿತು ಸಂಪೂರ್ಣ ಮಾಹಿತಿಯನ್ನು ಮಾಲೀಕರಿಗೆ ಒದಗಿಸುವುದರ ಮೂಲಕ ಅವಶ್ಯಕ ಸಹಕಾರ ನೀಡಲು ಬದ್ಧರಾಗಿರುತ್ತಾರೆ.

Leave a Reply

Your email address will not be published. Required fields are marked *

ನಿರ್ದಿಷ್ಟ ಕಾನೂನು ಪ್ರಶ್ನೆಗಳನ್ನು ಹೊಂದಿರುವಿರಾ? ನಮ್ಮ ತಜ್ಞರು ಮತ್ತು ಸ್ವಯಂಸೇವಕರನ್ನು ಕೇಳಿ.